ಶ್ರೀಕಾರದ ಸಾಕಾರ

ಶೇಖರ್‌ಪೂರ್ಣ


ಗುಂಡಿಗೆಯ ಗೂಡಿಗೆ
ಕನ್ನ ಹಾಕಿದಾಗ ಚಿಟ್ಟೆಗಳ ದರ್ಶನ
ರುದ್ರ ರೌದ್ರಕ್ಕೆ ಆಕ್ರಂದನ
ಗೂಡಿಗೆ ಕೊಳ್ಳಿ ಹಿಡಿದು
ಸುಟ್ಟಾಗ ಸ್ಮಶಾನವಾಗಿ
ಬೂದಿಯುಳಿಯಿತು.
*
*
*
ಬೂದಿಯನ್ನೇ ಜೀವಾಧಾರವಾಗಿಸಿಕೊಂಡು
ಪೇಟೇಂಟ್ ಪಡೆಯುವ ಜೀವ; ಜೀವವಾಗುಳಿಯುವುದಿಲ್ಲ-ಚಿಗುರಿ
ಗಿಡವಾಗಿ ಹೂ ತಳೆದು ಅಲ್ಲಿಯ ಮಕರಂದಕ್ಕೆ ಚಿಟ್ಟೆಗಳು ಹಾರಾಡಿಯಾವು.
ವರ್ಗ ಸಂಕರಣದಲ್ಲಿ ದೊರೆತಷ್ಟೆ ಲಾಭವಾಗಿ - ಆ ಲಾಭಕ್ಕಷ್ಟೆ ಜೀವ ಸೀಮಿತವಾಗಿ...
ಥೂ, ಬೆಂಕಿ ಇಕ್ಕ,
ಮೈ ಮನವೆರಡು ಸುಡುಗಾಡಾದವು.
*
*
*
ಸುಡುಗಾಡಿನ ಪ್ರ್‍ಏತ ಸಂಪತ್ತಿಗೆ
ಜೋತು ಬೀಳುವ ಜೀವಗಳೆಲ್ಲ
ಬೇತಾಳದಂತೆ ಕತೆ ಹೇಳತೊಡಗಿದಾಗ
ಮೌನವಾಗಿ ಕೇಳುವ ವಿಕ್ರಮಾರ್ಕನೂ ಇಲ್ಲ
ಭೂತಗಳ ನಡುವೆ ಬೇತಾಳ ಮರೆಯಾಗಿ
ಆತ್ಮವೇ ಬೇತಾಳವಾಗಿ...
*
*
*
ಕತೆ ಕತೆಯೂ ಅಲ್ಲ
ಪ್ರಶ್ನೆಗಳೂ ಉಳಿಯಲಿಲ್ಲ.
ಇಲ್ಲದ ಪ್ರಶ್ನೆಗೆ
ಉತ್ತರ ಕಾಣುವ ಆತ್ಮ ನಷ್ಟಕ್ಕೆ
ಉತ್ತರ ಕಾಣುವ ಸಾಹಸವೂ ಬೇಕಿಲ್ಲ-ಸಾಧ್ಯವೂ ಇಲ್ಲ,
ಮೈ ಮನಸ್ಸನ್ನೆಲ್ಲ ಸುಟ್ಟು ರುದ್ರನನ್ನಾಗಿಸಿದ
ಚಿಟ್ಟೆಗಳಿಗೆ ನಮಸ್ಕಾರ-ಶ್ರೀಕಾರದ ಸಾಕಾರ-
ಮಕರಂದವೇನೂ ಇಲ್ಲ-
ಹೋಗಿಬನ್ನಿ-ಬೇಡ
ಬರಬೇಡಿ...
ಮನಸ್ಸೆಲ್ಲ ವಿಕಾರ.

ಏಪ್ರಿಲ್ ೨೯,೧೯೯೮

0 comments: